ಬುನ್ಸೆನ್, ರಾಬರ್ಟ್ ವಿಲ್‍ಹೆಲ್ಮ್ ಫಾನ್	
1811-99. ಜರ್ಮನಿಯ ರಸಾಯನವಿಜ್ಞಾನಿ. ಗಟೆಂಗೆನ್ನಿನಲ್ಲಿ ಜನನ 31.3.1811. ಹೈಡಲ್ ಬರ್ಗಿನಲ್ಲಿ ಮರಣ 16-8-1899. ಸಾವಯವ ಸಂಯುಕ್ತಗಳ ಗುಣವಿಶೇಷಗಳು ಅವುಗಳ ಅಣುರಚನೆಯಲ್ಲಿಯ ಸಾವಯವ ರ್ಯಾಡಿಕಲ್ಲುಗಳನ್ನು ಅವಲಂಬಿಸಿವೆಯೆಂದು ತೋರಿಸಲು ಪ್ರಯತ್ನಿಸಿದ. ಹೀಗೆ ಈತ ಮೀಥೇನಿನಿಂದ ಬರುವ ಮೀಥೈಲ್ ಎಂಬ ಮೂಲ ಘಟಕವಿರುವ ಸಂಯುಕ್ತಗಳಿಗೆ ತಮ್ಮದೇ ಆದ ವಿಶಿಷ್ಟ ಗುಣಗಳಿರುತ್ತವೆಂದು ಸಾಧಿಸ ಹೊರಟು ಮೀಥೈಲ್ ಮೂಲ ಘಟಕವನ್ನು ಪ್ರತ್ಯೇಕಿಸಲು ಪ್ರಯತ್ನಪಟ್ಟ. ಈ ಪ್ರಯೋಗದಲ್ಲಿ ಈತನಿಗೆ ಮೀಥೈಲ್ ಬದಲು ಕೇಕೋಡಿಲ್ ಎಂಬ ದುರ್ವಾಸನೆಯ ಸಂಯುಕ್ತ ದೊರಕಿತು. ಇಂಥ ಪ್ರಯೋಗಗಳು ಸಾವಯವ ಮೂಲಘಟಕಗಳ ಮೇಲಿನ ಸಂಶೋಧನೆಗೆ ವಿಶೇಷ ಪ್ರೇರಣೆ ಒದಗಿಸಿದುವು. ಆದರೆ ಕೇಕೋಡಿಲ್ ತಯಾರಿಕೆಗೆ ಬುನ್ಸೆನ್ ಆರ್ಸೆನಿಕ್ ಉಪಯೋಗಿಸಿದ್ದರಿಂದ ಇವನಿಗೆ ವಿಷಪ್ರಾಶನವಾಗಿ ಪ್ರಾಣಾಪಾಯ ಒದಗಿತು. ಆದರೂ ಧೃತಿಗೆಡದೆ ತಾಳ್ಮೆಯಿಂದ ಆರ್ಸೆನಿಕ್ ವಿಷಪ್ರಾಶನಕ್ಕೆ ಪರಿಹಾರೋಪಾಯ ಹುಡುಕಲೆತ್ನಿಸಿ ಕಬ್ಬಿಣದ ಹೈಡ್ರಾಕ್ಸೈಡ್ ಇಂಥ ಪರಿಹಾರಕವಾಗಿ ಹೆಚ್ಚು ಪರಿಣಾಮಕಾರಿ ಆಗಬಲ್ಲದೆಂದು ತಿಳಿದ. ಕೇಕೋಡಿಲ್ ಸಂಯುಕ್ತ ಕೆಲಸ ನಡೆಯುತ್ತಿದ್ದಾಗ ಉಂಟಾದ ಆಸ್ಫೋಟನೆಯಲ್ಲಿ ಒಂದು ಕಣ್ಣು ಕಳೆದುಕೊಂಡುದಲ್ಲದೆ ಪ್ರಾಣವೇ ಹೋಗಬಹುದಾದ ಪರಿಸ್ಥಿತಿಯಿಂದ ಪಾರಾದ.

	ಊದುಕುಲುಮೆಯಿಂದ (ಬ್ಲಾಸ್ಟ್ ಫರ್ನೇಸ್) ಹೊರಬರುವ ಅನಿಲಗಳನ್ನು ಆಭ್ಯಸಿಸಿ ಅನಿಲ ವಿಶ್ಲೇಷಣಕ್ರಮ ರೂಪಿಸಿದ. ಹಾಗೆಯೇ ಊದುಕುಲುಮೆಗಳಲ್ಲಿಯ ಶಾಖದ ಬಹುಭಾಗ ನಷ್ಟವಾಗುವುದನ್ನು ಮನಗಂಡು ಅದನ್ನು ಕಡಿಮೆ ಮಾಡಲು ಕುಲುಮೆಗಳಲ್ಲಿಯ ಅವಾಹಕಗಳನ್ನು ಉತ್ತಮಪಡಿಸಲು ಪ್ರಯತ್ನಿಸಿದ. ಹೆನ್ರಿ ರೊಸ್ಕೋನೊಡನೆ ಕೆಲಸಮಾಡಿ ಬೆಳಕಿನ ತೀವ್ರತೆ ಅಳೆಯುವ ವಿಧಾನವೊಂದನ್ನು ನಿರೂಪಿಸಿದ್ದಲ್ಲದೆ ಬೆಳಕಿನ ಏಕಮಾನವನ್ನೂ ನಿರ್ಣಯಿಸಿದ. ಅಯೊಡಿಮೆಟ್ರಿ ಪದ್ಧತಿ ಮತ್ತು ಜ್ವಾಲಾ ಪರೀಕ್ಷೆ ಸಿದ್ಧ ಮಾಡಿದ. ಲೀಥಿಯಮ್ ಲೋಹ ಅದರ ಸಂಯುಕ್ತಗಳಲ್ಲಿ ಇರುವುದು ಆರ್ಫ್ ವೆಡ್ಸ್‍ನಿಂದ 1817ರಲ್ಲಿ ಶೋಧಿಸಲ್ಪಟ್ಟದ್ದರೂ ಅದು ಪ್ರತ್ಯೇಕಿಸಲ್ಪಟ್ಟದ್ದು 1855ರಲ್ಲಿ ಮಾತ್ರ-ಬುನ್ಸೆನ್ ಮತ್ತು ಮ್ಯಾಥಿಸೆನ್‍ರಿಂದ. ಬುನ್ಸೆಸನ್ ಮೆಗ್ನೀಸಿಯಮ್ ಲೋಹ ತಯಾರಿಕೆಯ ವಿಧಾನವೊಂದನ್ನು ರೂಪಿಸಿದ. ಈ ಲೋಹ ಉಜ್ಜ್ವಲವಾಗಿ ಬೆಳಗುವ ಬೆಳಕು ಕೊಡುವುದನ್ನು ತೋರಿಸಿಕೊಟ್ಟ.

	ಈತ ಇಂಗಾಲಸತುವಿನ ವಿದ್ಯುತ್ಕೋಶ (1814), ಮಂಜಿನ ಕೆಲೊರಿಮಾಪಕ (1870), ಬಾಷ್ಪ ಕೆಲೊರಿಮಾಪಕ (1887), ಸೋಸು ರೇಚಕ (1868) ಇವೇ ಅಲ್ಲದೆ ಶಾಖ ನಿಯಂತ್ರಕ ಮತ್ತು ನಿಯತ ಮಟ್ಟದ ನೀರಿನ ತೊಟ್ಟಿಗಳನ್ನೂ ವಿನ್ಯಾಸಮಾಡಿದ. ಕಿರ್ಖಫನ ಒಡಗೂಡಿ ರೋಹಿತಮಾಪಕವನ್ನು ಅಣಿಗೊಳಿಸಿದ್ದು (1859) ಮತ್ತು ಧಾತುಗಳನ್ನು ಅವುಗಳ ರೋಹಿತವಿಶ್ಲೇಷಣೆಯಿಂದ ಗುರುತಿಸಬಹುದೆಂದು ತೋರಿಸಿಕೊಟ್ಟದ್ದು ಬುನ್ಸೆನ್ನನ ಮಹತ್ತ್ವದ ಸಂಶೋಧನೆ. ಇದೇ ವಿಧಾನದಿಂದ ದುರ್ಖೀಮನ ಖನಿಜ ಜಲದಲ್ಲಿ ಮೊತ್ತ ಮೊದಲ ಬಾರಿಗೆ ಸೀಸಿಯಮ್ (1860) ಮತ್ತು ರುಬೆಡಿಯಮ್ (1861) ಲೋಹಗಳನ್ನು ಪತ್ತೆ ಹಚ್ಚಲಾಯಿತು. 

	ಐಸ್‍ಲೆಂಡಿನಲ್ಲಿರುವ ಬಿಸಿನೀರಿನ ಬುಗ್ಗೆಗಳು ಹೇಗೆ ಉಂಟಾಗುತ್ತವೆಂಬ ವಿಷಯವಾಗಿ ಬುನ್ಸೆನ್ ವೈಜ್ಞಾನಿಕ ವಿವರಣೆ ನೀಡಿದ (1845); ಬಂಡೆಗಳ ಬಿರುಕುಗಳ ಮೂಲಕ ನೀರು ಭೂಮಿಯೊಳಕ್ಕೆ ಹೊಕ್ಕು ಅತ್ಯಂತ ಹೆಚ್ಚು ಶಾಖವಿರುವಲ್ಲಿಗೆ ಹರಿಯುತ್ತದೆ, ಅಲ್ಲಿ ಅದು ತನ್ನ ಕುದಿಬಿಂದುವಿಗಿಂತ ಅಧಿಕವಾಗಿ ಕಾಸಲ್ಪಟ್ಟು ಹೆಚ್ಚು ಒತ್ತಡ ಸಂಭವಿಸುತ್ತದೆ. ಪರಿಣಾಮವಾಗಿ ಹೊರಗೆಸೆಯಲ್ಪಟ್ಟ ನೀರು ಬಿಸಿಬುಗ್ಗೆಯಾಗಿ ಚಿಮ್ಮುತ್ತದೆ. ಬುನ್ಸೆನ್ ಜ್ವಾಲಕದ ನಿರ್ಮಾಪಕ ಮೈಕೇಲ್ ಫ್ಯಾರಡೇ. ಆದರೆ ಇದನ್ನು ಪ್ರಚಾರಕ್ಕೆ ತಂದವ ಸ್ವತಃ ಬುನ್ಸೆನ್. 										
(ಟಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ